ಕೇಮ್ಯಾನ್ ದ್ವೀಪಗಳು

ಬ್ರಿಟಿಷ್ ವಸಾಹತು.  ಗ್ರ್ಯಾಂಡ್ ಕೇಮ್ಯಾನ್, ಲಿಟ್ಲ್ ಕೇಮ್ಯಾನ್ ಮತ್ತು ಕೇಮ್ಯಾನ್ ಬ್ರ್ಯಾಕ್ ಎಂಬ ಮೂರು ದ್ವೀಪಗಳ ಗುಂಪು.  ಕ್ಯಾರಿಬೀಯನ್ ಸಮುದ್ರದಲ್ಲಿ ವೆಸ್ಟ್ ಇಂಡೀಸ್ ಪ್ರದೇಶದಲ್ಲಿರುವ ಇವು ತಗ್ಗಾದ ಹವಳದ್ವೀಪಗಳು.  ಇವುಗಳ ಒಟ್ಟು ವಿಸ್ತೀರ್ಣ 100 ಚ.ಮೈ. ಜನಸಂಖ್ಯೆ 7,616(1960).  ಇವರಲ್ಲಿ ಐದನೆಯ ನಾಲ್ಕರಷ್ಟು ಮಂದಿ ಗ್ರಾಂಡ್ ಕೇಮ್ಯಾನ್‍ನಲ್ಲಿ ವಾಸಿಸುತ್ತಾರೆ.  ಗ್ರಾಂಡ್ ಕೇಮ್ಯಾನ್ ಜಮೇಕದಿಂದ ಪಶ್ಚಿಮ ವಾಯುವ್ಯಕ್ಕೆ 190 ಮೈ. ದೂರದಲ್ಲಿದೆ.  ಜಾರ್ಜಟೌನ್ ಮತ್ತು ಬಾಡೆನ್ ಟೌನ್ ಇಲ್ಲಿರುವ ಎರಡು ಪಟ್ಟಣಗಳು.  ಜಾರ್ಜ್ ಟೌನ್ ರಾಜಧಾನಿ.  ಗ್ರಾಂಡ್ ಕೇಮ್ಯಾನ್ 22 ಮೈ. ಉದ್ದ, 4-8 ಮೈ. ಅಗಲ ಇದೆ.  ಮಿಕ್ಕೆರಡು ದ್ವೀಪಗಳು ಗ್ರಾಂಡ್ ಕೇಮ್ಯಾನ್‍ನಿಂದ ಪೂರ್ವ ಆಗ್ನೇಯಕ್ಕೆ 60 ಮೈ.  ಮತ್ತು 90 ಮೈ.ಗಳ ನಡುವೆ ಇದೆ.  ಕೇಮ್ಯಾನ್ ಬ್ರ್ಯಾಕ್ ದ್ವೀಪದ ಮಧ್ಯೆ ಒಂದು ವಿಶಿಷ್ಟವಾದ ಭಾರೀ ಸುಣ್ಣಕಲ್ಲಿನ ಮುಮ್ಮೈ ದಿಣ್ಣೆಯುಂಟು.  ತೀರಗಳು ದಿಣ್ಣೆಗಳಿಂದಲೂ ಕಲ್ಲು ಬಂಡೆಗಳಿಂದಲೂ ತುಂಬಿವೆ.  ನದಿಗಳಿಲ್ಲ.

	ಕೇಮ್ಯಾನ್ ದ್ವೀಪಗಳು ಮೊದಲು ಜಮೇಕದ ಅಧೀನದಲ್ಲಿದ್ದುವು.  1959ರ ಜುಲೈ ತಿಂಗಳಲ್ಲಿ ಅವಕ್ಕೆ ಸ್ವಯಂಮಾಡಳಿತ ದೊರಕಿತು.  ಜಮೇಕದ ಗವರ್ನರ್ ಚುನಾಯಿತ ವಿಧಾನಮಂಡಲದ ಸಲಹೆ ಮತ್ತು ಸಮ್ಮತಿ ಪಡೆದು ಆಡಳಿತ ನಿರ್ವಹಿಸುತ್ತಾನೆ.  ವರ್ಷಕ್ಕೊಮ್ಮೆ ಆತ ಅಲ್ಲಿಗೆ ಭೇಟಿ ನೀಡಲೇಬೇಕೆಂಬ ನಿಯಮವುಂಟು.  ಉಳಿದ ಕಾಲದಲ್ಲಿ ಅವನನ್ನು ಪ್ರತಿನಿಧಿಸುವ ಆಡಳಿತಾಧಿಕಾರಿ ಇರುತ್ತಾನೆ.  ಕೇಮ್ಯಾನ್ ದ್ವೀಪಗಳಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಯಲ್ಲಿದೆ.

	ಕಡಲಾಮೆಯೇ ಇಲ್ಲಿಯ ಜನರ ಜೀವನಾಧಾರ.  ಕಡಲಾಮೆಯ ಉತ್ಪನ್ನಗಳು ಮುಖ್ಯ ನಿರ್ಯಾತ ವಸ್ತುಗಳು. ತಾಳೆ ಜಾತಿಯ ಮರಗಳಿಂದ ಹಗ್ಗ ತಯಾರಿಸುವುದು ಒಂದು ಮುಖ್ಯ ಕೈಗಾರಿಕೆಯಾಗಿತ್ತು.  ಈಗ ಇದು ಕ್ಷೀಣಿಸಿದೆ.  ಇದರ ವ್ಯಾಪಾರ ಮುಖ್ಯವಾಗಿ ನಡೆಯುವುದು ಅಮೆರಿಕ ಮತ್ತು ಜಮೇಕಗಳೊಂದಿಗೆ.  ಸುಧಾರಿತ ವಸತಿ ಮತ್ತು ಸಾರಿಗೆ ಸೌಲಭ್ಯಗಳಿಂದಾಗಿ ಇದರ ಪ್ರವಾಸೋದ್ಯಮ ಬೆಳೆಯುತ್ತಿದೆ.  ಕಿಂಗ್‍ಸ್ಟನ್, ಮಿಯಾಮಿ, ಸ್ಯಾನ್ ಜೋಸೆ ಮತ್ತು ಪನಾಮ ಸಿಟಿಯಿಂದ ಗ್ರಾಂಡ್ ಕೇಮ್ಯಾನ್‍ನಲ್ಲಿಯ ಓವೆನ್ ರಾಬಟ್ರ್ಸ್ ವಿಮಾನ ನಿಲ್ದಾಣಕ್ಕೆ ವಿಮಾನ ಸಂಪರ್ಕವಿದೆ.  ಕೇಮ್ಯಾನ್ ಬ್ರ್ಯಾಕ್‍ನಲ್ಲೂ ಒಂದು ವಿಮಾನ ಇಳಿದಾಣವುಂಟು.

	ಕೇಮ್ಯಾನ್ ದ್ವೀಪಗಳನ್ನು ಕಂಡುಹಿಡಿದವನು ಕೊಲಂಬಸ್.  ಇಲ್ಲಿ ಕಡಲಾಮೆಗಳು (ಟರ್ಟಲ್ಸ್) ಹೇರಳವಾಗಿದ್ದುದನ್ನು ಕಂಡು ಆತ ಈ ದ್ವೀಪಗಳನ್ನು ಟಾರ್ಟೂಗಾಸ್ ಎಂದು ಕರೆದ.  18ನೆಯ ಶತಮಾನದಲ್ಲಿ ಇವು ಬ್ರಿಟಿಷರ ವಸಾಹತಾಗಿ, ಜಮೇಕದ ಆಡಳಿತಕ್ಕೆ ಒಳಪಟ್ಟುವು.                       
       (ಆರ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ